ಹಿರಣ್ಣಯ್ಯ, ಮಾಸ್ಟರ್
1934- . ನಗೆಯ ನೆಲದ ತ್ರಿವಿಕ್ರಮನೆಂಬ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರನಾದ ನಟ. ವ್ಯಂಗ್ಯ, ವಿಡಂಬನೆ, ಸಾಮಾಜಿಕ, ರಾಜಕೀಯ ಟೀಕೆಗಳಿಂದ ಕಳೆದ ಐದು ದಶಕಗಳಿಂದ ನಿರಂತರವಾಗಿ ಜನ ಜಾಗೃತಿ ಮಾಡುತ್ತಿರುವ ಕಲಾವಿದರು- ಮಾಸ್ಟರ್ ಹಿರಣ್ಣಯ್ಯ. ತಂದೆ ಕಲ್ಚರ್ಡ್ ಕಮೆಡಿಯನ್ ಹಿರಣ್ಣಯ್ಯ. ತಾಯಿ ಶಾರದಮ್ಮ. ಹುಟ್ಟಿದ್ದು 1934ರ ಫೆಬ್ರುವರಿ 13ರಂದು. ತಂದೆ ತಾಯಿಗಳು ತಮ್ಮ ಏಕೈಕ ಮಗನಿಗೆ ಇಟ್ಟ ಹೆಸರು ನರಸಿಂಹಮೂರ್ತಿ. ರಂಗಭೂಮಿಯ ಹಾಗೂ ಕಲೆಯ ನಂಟು ಮೂರು ತಲೆಮಾರುಗಳಿಂದ ಬಂದದ್ದು. ಮುತ್ತಾತ ಕಣತೂರ್ ಅನಂತರಾಮಯ್ಯ, ಗಮಕವಿದ್ವಾನ್, ಭಾರತ ವಾಚನದಲ್ಲಿ ಪರಿಣಿತರು. ತಾತ ಅನಂತರಾಮಯ್ಯ ನಟರು, ರಂಗ ಕಲಾವಿದರು. ತಂದೆ ಕೆ ಹಿರಣ್ಣಯ್ಯ ದಂತಕತೆಯಾದ ಕಲ್ಚರ್ಡ್ ಕಮೆಡಿಯನ್ ಹಿರಣ್ಣಯ್ಯ. ಚಿತ್ರ ನಟರಾಗಿ, ನಿರ್ಮಾಪಕರಾಗಿ, ನಾಟಕಕಾರರಾಗಿ, ನಟರಾಗಿ ಪ್ರಸಿದ್ಧರಾದವರು. ಕೆ.ಹಿರಣ್ಣಯ್ಯ ಮಿತ್ರಮಂಡಲಿಗೆ ಲೋಕ ಮಾನ್ಯತೆ ಗಳಿಸಿಕೊಟ್ಟವರು. 

	ಆರನೆ ವರ್ಷದಲ್ಲಿ ಇದ್ದಾಗಲೇ ಬಣ್ಣದ ಬದುಕಿನೊಂದಿಗೆ ಸಂಪರ್ಕ. ವಾಣಿ ಕನ್ನಡ ಚಿತ್ರ (1940)ದಲ್ಲಿ ಬಾಲಕನ ಪಾತ್ರ. ತಂದೆಗೆ ತಮ್ಮ ಮಗ ರಂಗಭೂಮಿಯ ನಟನಾಗಬಾರದು, ಡಾಕ್ಟರ್ ಆಗಬೇಕೆಂಬ ಆಸೆ. ಅದಕ್ಕಾಗಿ ಕಂಪನಿಯ ಮನೆಯ ಹತ್ತಿರ ಸುಳಿಯದಂತೆ ನಿಷೇಧಾಜ್ಞೆ. ಮೈಸೂರಿನಲ್ಲೇ ತಾಯಿಯ ಸೇವೆ ಮಾಡುತ್ತಾ ಸಾಗಿದ ವಿದ್ಯಾಭ್ಯಾಸ. ಶಾರದಾ ವಿಲಾಸ ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ವಿದ್ಯಾರ್ಥಿಗಳ ಸಹಾಯನಿಧಿಗಾಗಿ ನಾಟಕವಾಡಿದ್ದರು. ಗುರುಗಳಾದ ಗೋಪಾಲಕೃಷ್ಣ ಅಡಿಗರ ಮಾರ್ಗದರ್ಶನದಲ್ಲಿ ನಾಟಕ ಮಾಡಿದ ಅನುಭವ. ಮರೆಯಲಾಗದ ಅನುಭವ.

	1949ರಲ್ಲಿ ತಾಯಿಯ ವಿಯೋಗ. 1952ರ ಅಕ್ಟೋಬರ್‍ನಲ್ಲಿ ಕಾಲೇಜು ಮುಗಿಸಿ ತಂದೆಯ ಸಹಾಯಕನಾಗಿ ಮಿತ್ರಮಂಡಲಿ ಸೇರ್ಪಡೆ. ಮಡಿಕೇರಿಯಲ್ಲಿ ಪಿತೃವಿಯೋಗ (1955) ಬದುಕ ಅಸ್ಥಿರ. ನಾಟಕ ಕಂಪನಿ ಸಂಘಟಿಸಿ ಪ್ರದಾರ್ಶನಾರಂಭ, ನಷ್ಟ ಪರಂಪರೆ. ಮದರಾಸಿಗೆ ಪ್ರಯಾಣ, ಚಲನಚಿತ್ರದಲ್ಲಿ ತರಬೇತಿಗೆ. ಬಿ.ಆರ್.ಪಂತಲು ಆಶ್ರಯ. ಮತ್ತೆ ಗರಿಗೆದರಿದ ರಂಗಭೂಮಿಯ ಆಕರ್ಷಣೆ, ತಂದೆಯ ಕಂಪನಿಯಲ್ಲಿ ರಂಗಕರ್ಮಿಯಾಗಿದ್ದ ಮುನಿರಂಗಪ್ಪ ಸಹಭಾಗಿತ್ವದಲ್ಲಿ ಕೆ.ಹಿರಣ್ಣಯ್ಯ ಮಂಡಲಿಯ ಪುನರಾರಂಭ (1959). 

ತಂದೆ ಪ್ರಯೋಗಿಸುತ್ತಿದ್ದ ಸಾಮಾಜಿಕ, ಕೌಟುಂಬಿಕ ವಸ್ತುಗಳನ್ನುಳ್ಳ  ನಾಟಕಗಳ ಅಭಿನಯ. ತಂದೆಯ ಪ್ರಭಾವವಲಯದಿಂದ  ಹೊರಬರಲಾಗದ ಪರಿಸ್ಥಿತಿ. ಹೊಸಹೆಜ್ಜೆ ಹಾಕುವುದೂ ಅನಿವಾರ್ಯವಾದ ಪರಿಸ್ಥಿತಿ. ರಾಜಕೀಯವನ್ನು ತರಾಟೆಗೆ ತೆಗೆದುಕೊಳ್ಳುವ ವಸ್ತುವನ್ನು ಒಳಗೊಂಡ ನಾಟಕಗಳನ್ನೇಕೆ ಆಡಬಾರದು ಎನ್ನಿಸಿತು. ಆ ಚಿಂತನೆಯ ಫಲ ಲಂಚಾವತಾರ. ರಾಜಕೀಯದ ಜೇನುಗೂಡಿಗೆ ಕೈಹಾಕುವ ಯತ್ನ ನಡೆದದ್ದು 1959ರಲ್ಲಿ. ನರಸಿಂಹ ಮೂರ್ತಿ-ಮಾಸ್ಟರ್ ಹಿರಣ್ಣಯ್ಯ ಹಿಂತಿರುಗಿ ನೋಡಲಿಲ್ಲ. ಲಂಚಾವತಾರ, ಭ್ರಷ್ಟಾಚಾರ, ಅತ್ಯಾಚಾರ, ಕಪಿಮುಷ್ಠಿ, ನಡುಬೀದಿನಾರಾಯಣ, ದೇವದಾಸಿ, ಎಚ್ಚಮನಾಯಕ ನಾಟಕಗಳ ಅನಾವರಣ. ಲಂಚಾವತಾರ ಎಂಟು ಸಾವಿರ, ಭ್ರಷ್ಟಾಚಾರ ಮೂರುಸಾವಿರ ಹೀಗೆ ಎಲ್ಲಾ ನಾಟಕಗಳ ಪ್ರದರ್ಶನಗಳೂ ನಾಲ್ಕು ಸಂಖ್ಯೆಯನ್ನು ದಾಟಿವೆ. ಐದನೆಯ ಸಂಖ್ಯೆಗೆ ಅಡಿಯಿಟ್ಟರೆ ಆಶ್ಚರ್ಯವಿಲ್ಲ. ಇವು ಕನ್ನಡ ರಂಗಭೂಮಿಯ ಸಾರ್ವಕಾಲಿಕ ದಾಖಲೆಗಳು. 

ಲಂಚಾವತಾರ, ನಡುಬೀದಿ ನಾರಾಯಣ ಭ್ರಷ್ಟಾಚಾರ, ಅತ್ಯಾಚಾರ ಇವು ಖಾದಿ, ಖಾಕಿ, ಕಾವಿಗಳ ಭ್ರಷ್ಟ ಸಾಮ್ರಾಜ್ಯವನ್ನು ಅನಾವರಣಗೊಳಿಸುತ್ತವೆ. ಹಿರಣ್ಣಯ್ಯ ತಮ್ಮ ಅತ್ಯದ್ಭುತ ಮಾತುಗಾರಿಕೆಯಿಂದ ಜನರನ್ನು ರಂಜಿಸುತ್ತಾರೆ. ನಾಟಕ ಅದೇ. ವೇದಿಕೆ ಅದೇ. ಆದರೆ ರಕ್ತಬೀಜಾಸುರನಂತೆ ಬೆಳೆಯುವ ಭ್ರಷ್ಟಾಚಾರ, ನಿತ್ಯನೂತನ ಸಾಮಗ್ರಿ ಒದಗಿಸುತ್ತದೆ. `ನಾನು ಪ್ರೇಕ್ಷಕನ ಮೂಕವೇದನಗೆ ನುಡಿಯಾಗುತ್ತೇನೆ. ಹಾಗಾಗಿ ನನ್ನ ಪ್ರತಿಯೊಂದು ಪ್ರದರ್ಶನವೂ ಹೊಸ ಪ್ರಯೋಗವಾಗುತ್ತದೆ. ಇದು ಹಿರಣ್ಣಯ್ಯನವರ ಯಶಸ್ಸಿನ  ಗುಟ್ಟು.

`ಕಪಿಮುಷ್ಟಿ ನಾಟಕ ತುರ್ತುಪರಿಸ್ಥಿತಿ ಕಾಲದಲ್ಲಿ ರಚಿತವಾದ ನಾಟಕ. ಮಾಸ್ಟರ್ ಹಿರಣ್ಣಯ್ಯ ರಾಜಕಾರಣಿಗಳ ಅವಕೃಪೆಗೆ ಪಾತ್ರರಾಗಿದ್ದಾರೆ. ಮಠಾಧೀಶರ ಬೆದರಿಕೆಗೆ ಗುರಿಯಾಗಿದ್ದಾರೆ.  ಆದರೆ ಧೃತಿಗೆಡಲಿಲ್ಲ. ಅವರ ಮಾತಿನಲ್ಲಿ ಅಶ್ಲೀಲವಿಲ್ಲ. ಚಾರಿತ್ರ್ಯ ಹರಣವಿಲ್ಲ. ಅದು ನಗೆಮಲ್ಲಿಗೆ ಸುತ್ತಿದ ವಜ್ರದಂಡ.   

ಮಾಸ್ಟರ್ ಹಿರಣ್ಣಯ್ಯ, ರಂಗಭೂಮಿಯ ಚಟುವಟಿಕೆ ಜೊತೆಗೆ ದೂರದರ್ಶನ, ಆಕಾಶವಾಣಿ ಮತ್ತು ಧ್ವನಿ ಸುರುಳಿಗಳಿಗಾಗಿ, ನಾಟಕಗಳನ್ನು ರಚಿಸಿದ್ದಾರೆ. ದಿವಂಗತ ಹಿರಣ್ಣಯ್ಯನವರ ಮೇರು ಕೃತಿ ದೇವದಾಸಿಯನ್ನು ಚಲನಚಿತ್ರರೂಪದಲ್ಲಿ ಸಿದ್ಧಪಡಿಸಿಕೊಟ್ಟಿದ್ದಾರೆ.

ನ್ಯೂಯಾರ್ಕ್, ಹೂಸ್ಟನ್, ವಾಷಿಂಗ್‍ಟನ್, ನ್ಯೂಜೆರ್ಸಿ, ಬೆಹರಿನ್, ಸಿಡ್ನಿ, ಲಂಡನ್ ಮೊದಲಾದ ಕಡೆ ತಮ್ಮ ನಾಟಕಗಳನ್ನು 1983, 1995 ಮತ್ತು 1997ರಲ್ಲಿ ಪ್ರದರ್ಶಿಸಿದ್ದಾರೆ.
ಪೋಲಿಸ್ ರಕ್ಷಣಾನಿಧಿ, ರೋಟರಿ, ಲಯನ್ಸ್ ಮೊದಲಾದ ಸಂಸ್ಥೆಗಳಿಗೆ ನೀಡಿರುವ ಸಹಾಯಾರ್ಥ ಪ್ರದರ್ಶನಗಳಿಗೆ ಲೆಕ್ಕವಿಲ್ಲ. ಕೇರಳ ಆಂಧ್ರ ಗೋವಾ ದೆಹಲಿಯಲ್ಲಿ ಸಹಾಯಾರ್ಥ ಪ್ರದರ್ಶಗಳನ್ನು ನೀಡಿದ್ದಾರೆ. 
ಅಬ್ಬರದ ವೇಷಭೂಷಣಗಳಿಲ್ಲ, ರಂಗ ಸಜ್ಜಿಕೆಗಳಿಲ್ಲ. ಸರಳವಾದ ರಂಗಸ್ಥಳ, ಮಿತವಾದ ಪಾತ್ರಗಳು. ಒಬ್ಬನೇ ಪಾತ್ರಧಾರಿ. ತ್ರಿವಿಕ್ರಮ ಗಿರಿಧಾರಿ- ಹಾಸ್ಯದ ಬತ್ತದ ಹೊನಲು. ಇದು ಮಾಸ್ಟರ್ ಹಿರಣ್ಣಯ್ಯನವರ ರಂಗವೈಭವ. ಈ ಮಹಾನ ಕಲಾವಿದನಿಗೆ ಸಂದ ಗೌರವಗಳು ಅಸಂಖ್ಯ.

ಈ ಹಾಸ್ಯ ತಿವಿಕ್ರಮನಿಗೆ ಕರ್ನಾಟಕ ಸರಕಾರ 1984ರಲ್ಲಿ ಕರ್ನಾ.ಕ ರಾಜ್ಯ ಪ್ರಶಸ್ತಿ ನೀಡಿದೆ. ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿವೀರಣ್ಣ ಪ್ರಶಸ್ತಿಯನ್ನು 1997ರಲ್ಲಿ ನೀಡಿ ಗೌರವಿಸಿದೆ. 
(ಎಂ.ಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ